ಬಿಟ್ಯುಮೆನ್
ನೈಸರ್ಗಿಕ ಅಥವಾ ಅಗ್ನಿಕಾರ್ಯಜನ್ಯ ಹೈದ್ರೊಕಾರ್ಬನ್ನುಗಳ ಮಿಶ್ರಣ. ಅಮೆರಿಕನ್ ಸೊಸೈಟಿ ಫಾರ್ ಮೆಟೀರಿಯಲ್ಸ್ ಅಂಡ್ ಟೆಸ್ಟಿಂಗ್ (ಂSಒಖಿ) ನೀಡಿರುವ ವ್ಯಾಖ್ಯೆ ಇದು. ಈ ಮಿಶ್ರಣದಲ್ಲಿ ಅನಿಲ, ದ್ರವ, ಅರ್ಧಘನ, ಹಾಗೂ ಘನ ಈ ಎಲ್ಲ ರೂಪದ ಹೈಡ್ರೊಕಾರ್ಬನ್ನುಗಳೂ ಇದ್ದು ಅವು ಕಾರ್ಬಾನ್‍ಡೈಸಲ್ಫೈಡಿನಲ್ಲಿ ಸುಲಭವಾಗಿ ಲೀನವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಬಳಸುವ ಬಿಟ್ಯುಮೆನ್ ಎಂಬ ಪದ ಕಪ್ಪು ಅಥವಾ ಕಂದು ಬಣ್ಣದ ಅರ್ಧಘನ ಅಥವಾ ಘನರೂಪದ ಹೈಡ್ರೊಕಾರ್ಬನ್ನುಗಳಿಗೆ ಮಾತ್ರ ಸೀಮಿತವಾಗಿದೆ. ಇದರಲ್ಲಿ ಆಸ್ಫಾಲ್ಟ್, ಟಾರೆಣ್ಣೆ ಮತ್ತು ಪಿಚ್ ಇರುತ್ತವೆ. ಂSಒಖಿ ಪ್ರಕಾರ, ಆಸ್ಫಾಲ್ಟ್, ಅಂದರೆ, ಕಚ್ಚಾ ಎಣ್ಣೆಯನ್ನು (ಪೆಟ್ರೋಲಿಯಮ್) ಬಟ್ಟಿ ಇಳಿಸಿ ಪೆಟ್ರೋಲ್, ಡೀಸಲ್ ಎಣ್ಣೆ, ಮೇಣ ಮುಂತಾದವನ್ನು ಬೇರ್ಪಡಿಸಿದ ಬಳಿಕ ಉಳಿಯುವ ಕಪ್ಪು ಬಣ್ಣದ ಅರ್ಧಘನ ರೂಪದ ವಸ್ತು. ಆದರೆ ಯೂರೊಪಿನಲ್ಲಿ ಇದನ್ನೇ ಬಿಟ್ಯುಮೆನ್ ಅನ್ನುತ್ತಾರೆ. ಯೂರೊಪಿಯನ್ನರ ಪ್ರಕಾರ ಆಸ್ಫಾಲ್ಟ್ ಅಂದರೆ ಭೂಗರ್ಭದಿಂದ ಸೋರಿ ಬಂದ ಪೆಟ್ರೋಲಿಯಮ್ ಬಾಷ್ಪೀಭವನ ಹೊಂದಿ ಅನಂತರ ಉಳಿಯುವ ಕಪ್ಪು ಬಣ್ಣದ ನೈಸರ್ಗಿಕ ವಸ್ತು.

ಟಾರೆಣ್ಣೆ ಅಥವಾ ಪಿಚ್ ಎಂದರೆ ಸಾಮಾನ್ಯವಾಗಿ ಎಲ್ಲ ಆಗ್ರ್ಯಾನಿಕ್ ಸಂಯುಕ್ತಗಳನ್ನು ವಾಯುವಿನ ಅಭಾವದಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಸಿದಾಗ ದೊರೆಯುವ ಒಂದು ಉಪೋತ್ಪನ್ನ. ಈ ಕ್ರಿಯೆಯಲ್ಲಿ ಆಗ್ರ್ಯಾನಿಕ್ ಸಂಯುಕ್ತಗಳು ಸಣ್ಣ ಸಣ್ಣ ಅಣುಗಳಾಗಿ ವಿಭಜನೆ ಹೊಂದುತ್ತವೆ ಮತ್ತು ಅದೇ ಕಾಲಕ್ಕೆ ಈ ಸಣ್ಣ ಸಣ್ಣ ಅಣುಗಳು ಪಾಲಿಮೇರೀಕರಣ ಹೊಂದಿ ಹೆಚ್ಚಿನ ಅಣುತೂಕವಿರುವ ಕಪ್ಪು ಅಥವಾ ಪಿಚ್ಚನ್ನು ಕೊಡುತ್ತವೆ. ಟಾರೆಣ್ಣೆ ಅಥವಾ ಪಿಚ್ ಇವುಗಳ ನಡುವಿನ ಭೇದವನ್ನು ನಿಖರವಾಗಿ ಹೇಳುವುದು ಕಠಿಣ. ಈ ಉಪೋತ್ಪನ್ನ ದ್ರವರೂಪದಲ್ಲಿದ್ದು ಕಡಿಮೆ ಸ್ನಿಗ್ಧವಾಗಿದ್ದರೆ ಅದಕ್ಕೆ ಟಾರೆಣ್ಣೆ ಅನ್ನುತ್ತಾರೆ. ಆದರೆ ಅದೇ ವಸ್ತು ಹೆಚ್ಚು ಸ್ನಿಗ್ಧವಾಗಿದ್ದರೆ ಅಥವಾ ಅರ್ಧಘನ ಅಥವಾ ಘನರೂಪದಲ್ಲಿದ್ದರೆ ಅದಕ್ಕೆ ಪಿಚ್ ಎನ್ನುತ್ತಾರೆ. 
(ನೋಡಿ- ಪೆಟ್ರೋಲಿಯಮ್)
(ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ